ಕಲೂಗಾ : ಸೋವಿಯತ್ ದೇಶದ ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದ ಒಂದು ಪಟ್ಟಣ ಮತ್ತು ಆಬ್ಲಾಸ್ಟ್‌ (ಪ್ರದೇಶ). ಮಾಸ್ಕೋದ ನೈಋತ್ಯಕ್ಕೆ ೧೬೦ ಕಿಮೀ ದೂರದಲ್ಲಿ  ಅಕ ನದಿ ಎಡದಂಡೆಯ ಮೇಲಿದೆ. ಜನಸಂಖ್ಯೆ ೧೦,೪೧,೬೪೧ (೨೦೦೨). ವಾಜ಼್ಮ-ಟೂಲ ರೈಲುಮಾರ್ಗದಲ್ಲಿ, ಅದು ಮಾಸ್ಕೋ-ಕಿಯೆಫ್ ರೈಲುಮಾರ್ಗವನ್ನು ಸಂಧಿಸುವ ಸ್ಥಳಕ್ಕೆ ಹತ್ತಿರದಲ್ಲಿದೆ. ಯಂತ್ರೋಪಕರಣ, ಬೆಂಕಿಪೆಟ್ಟಿಗೆ, ಗಾಜು, ಪಾದರಕ್ಷೆ, ರಾಗಮಾಲಿಕೆ, ಬಟ್ಟೆ, ಪ್ಲಾಸ್ಟಕ್ ವಸ್ತುಗಳು, ಆಹಾರ ಪದಾರ್ಥಗಳು ಮುಂತಾದ ಅನೇಕ ಪದಾರ್ಥಗಳ ಕಾರ್ಖಾನೆಗಳಿವೆ. ಕಲೂಗಾದ ಸ್ಥಾಪನೆಯಾದದ್ದು ೧೪ನೆಯ ಶತಮಾನದಲ್ಲಿ. ಮಸ್ಕೊವಿನ ದಕ್ಷಿಣ ಗಡಿಯಲ್ಲಿ ಟಾಟರುಗಳ ವಿರುದ್ಧವಾದ ಆಯಕಟ್ಟಿನ ಸ್ಥಳದಲ್ಲಿತ್ತು. ೧೬೦೭ರಲ್ಲಿ ಆಕ್ರಮಣಕ್ಕೊಳಗಾಗಿದ್ದು, ಅನಂತರ ಪ್ರಾಂತ್ಯಾಡಳಿತಕೇಂದ್ರವಾಗಿದ್ದ ಈ ಪಟ್ಟಣ ಕ್ರಾಂತಿಪೂರ್ವಕಾಲದ ಆಹಾರ ಧಾನ್ಯ ಮಾರಾಟ ಕೇಂದ್ರವೆನಿಸಿತ್ತು. ಇಲ್ಲಿಂದ ಮಾಸ್ಕೋಗೆ ಧಾನ್ಯ ಸಾಗುತ್ತಿತ್ತು. ೧೮೫೦ರ ದಶಕದಲ್ಲಿ ನಡೆದ ಕಾಕೇಷಿಯನ್ ದಂಗೆಯ ನಾಯಕನಾಗಿದ್ದ ಷಾಮಿಲ್ ದೇಶಭ್ರಷ್ಟನಾಗಿ ಸ್ವಲ್ಪಕಾಲ ಇಲ್ಲಿದ್ದ. ೧೯೧೪ರಲ್ಲಿ ಜರ್ಮನ್ ಸೈನಿಕರು ಮಾಸ್ಕೋ ಕಡೆಗೆ ಮುನ್ನುಗ್ಗುತ್ತಿದ್ದಾಗ ಕೆಲಕಾಲ ಈ ನಗರ ಅವರ ಆಕ್ರಮಣಕ್ಕೊಳಗಾಗಿತ್ತು. ಇಲ್ಲಿ ೧೮ ಮತ್ತು ೧೯ನೆಯ ಶತಮಾನಗಳ ಅನೇಕ ಅಪೂರ್ವ ಕಟ್ಟಡಗಳಿವೆ. ೧೭೭ರಲ್ಲಿ ನಿರ್ಮಾಣವಾದ ರಂಗಮಂದಿರವೂ ವಸ್ತುಸಂಗ್ರಹಾಲಯವೂ ಮುಖ್ಯವಾದವು.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ